ಬಂಟ್ವಾಳ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್‌ನ ಸಹಯೋಗ ದೊಂದಿಗೆ ಮೇ 12 ರಂದು ಪಾಣೆಮಂಗಳೂರು ಆಲಡ್ಕದ ಎಸ್. ಎಸ್ ಆಡಿಟೋರಿಯಂ ನಲ್ಲಿ ಹಮ್ಮಿಕೊಂಡಿರುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ, ಹಾಡುಗಾರ ರಹೀಂ ಬಿ.ಸಿ. ರೋಡ್ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಹೆಚ್. ತಿಳಿಸಿದ್ದಾರೆ.
ಬಾಲ್ಯದಲ್ಲಿಯೇ ಹಾಡುಗಾರಿಕೆ ಯಲ್ಲಿ ಆಸಕ್ತಿ ಬೆಳೆಸಿಕೊಂಡ ರಹೀಂ ಬಿ.ಸಿ.ರೋಡ್ ತನ್ನ ತಾಯಿ ಪರಿಸರದ ಖ್ಯಾತ ಸಬೀನಾ ಹಾಡುಗಾರ್ತಿ ಉಮಾತುಮ್ಮ (ಮೋಲು ದಾದ) ರಿಂದ ಪ್ರೇರಣೆ ಪಡೆದು ಹಾಡಲು ಶುರುಮಾಡಿದ್ದರು. ಪಕ್ಷಿಪಾಟ್, ಇರೀಲೋಗಂ, ಮಾನಿಕೈ ಮಾಣಿ ಮುತ್ತು… ನಂತಹ ಮಲಯಾಳಂ ಮಾಪಿಳ್ಳೆ ಹಾಡುಗಳ ದಾಟಿಗೆ ಬ್ಯಾರಿ ಹಾಡುಗಳನ್ನು ಬರೆದು ಹಾಡುತ್ತಿದ್ದ ಇವರು ನಂತರ ನಾಟಕಗಳಲ್ಲಿ ಹಿನ್ನೆಲೆ ಗಾಯಕರಾಗಿ ಗುರುತಿಕೊಂಡರು.
ಮೊದಲಿಗೆ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ರಚನೆಯ, ಪರಂಗಿಪೇಟೆ ಯುವಕ ಮಂಡಲದವರು ಪ್ರದರ್ಶಿಸಿದ್ಧ ನಾಟಕದಲ್ಲಿ ಹಾಡುವ ಮೂಲಕ ಹಿನ್ನೆಲೆ ಗಾಯಕನಾಗಿ ಗುರುತಿಸಿಕೊಂಡ ರಹೀಂ ಬಿ.ಸಿ. ರೋಡು ಹಲವಾರು ನಾಟಕಗಳಲ್ಲಿ ಸ್ವರಚನೆಯ ಹಾಡುಗಳನ್ನು ಹಾಡಿದ್ದಾರೆ. ಹಿರಿಯ ಬ್ಯಾರಿ ಹಾಡುಗಾರರಾಗಿ ಗುರುತಿಸಿಕೊಂಡಿರುವ ಇವರು ನೂರಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ, ಬ್ಯಾರಿ ಕವನ ವಾಚಿಸಿ, ಜನಮನ ಗೆದ್ದಿದ್ದಾರೆ.
ಹಾಡುವುದನ್ನೇ ವೃತ್ತಿ ಜೀವನವನ್ನಾಗಿ ಮಾಡಿಕೊಂಡ ರಹೀಮ್ ಬಿ.ಸಿ.ರೋಡ್ ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ಕೇರಳದ ನಾನಾ ಭಾಗಗಳಲ್ಲಿ ನಡೆದ ರಸಮಂಜರಿ ಕಾರ್ಯಕ್ರಮ ಗಳಲ್ಲಿ ಬ್ಯಾರಿ, ತುಳು, ಮಲಯಾಳಂ, ಕನ್ನಡ, ಹಿಂದಿ ಮಾತ್ರವಲ್ಲದೆ ಕನ್ನಡ ಜಾನಪದ ಹಾಗೂ ಹಿಂದಿ ಖವ್ವಾಲಿಗಳನ್ನು ಕೂಡಾ ಅಷ್ಟೇ ಸುಶ್ರಾವ್ಯವಾಗಿ ಹಾಡಿರುತ್ತಾರೆ.
ಮೊದಲಿಗೆ ರವಿ ಆಡಿಯೋ ಸೆಂಟರ್ ಪಾಣೆಮಂಗಳೂರು ಹೊರತಂದ ಧ್ವನಿ ಸುರುಳಿಗೆ ಸಾಹಿತ್ಯ ಬರೆದು ಹಾಡುವ ಮೂಲಕ ಬ್ಯಾರಿ ಸಂಗೀತ ಪ್ರೇಮಿಗಳ ಮನಗೆದ್ದ ರಹೀಂ ಬಿ.ಸಿ. ರೋಡ್ ಅನೇಕ ಬ್ಯಾರಿ ಹಾಡುಗಳ ಧ್ವನಿ ಸುರುಳಿಗೆ ಸಾಹಿತ್ಯ ಬರೆದು ಹಾಡಿದ್ದಾರೆ.
ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಅಳ್ವಾಸ್ ನುಡಿಸಿರಿ ಮತ್ತು ಬಿ.ಸಿ.ರೋಡ್ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ ಒಳಗೊಂಡಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ರಹೀಂ ಬಿ.ಸಿ. ರೋಡು ಅವರಿಗೆ ದೊರೆತಿವೆ.



