ಇಬ್ಬರ ವಿರುದ್ಧ ಪ್ರಕರಣ ದಾಖಲು
ಮಂಗಳೂರು:- ಪಟಾಕಿ ಅಂಗಡಿಗಳಿಗೆ ಅಲ್ಲಿದ್ದವರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿರುವ ಆರೋಪದಲ್ಲಿ ಇಬ್ಬರ ವಿರುದ್ಧ ಬಜ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುರತ್ಕಲ್ ಮಂಗಳಪೇಟೆಯ ಫಾಝಿಲ್ ಕೊಲೆ ಆರೋಪಿ ರೌಡಿಶೀಟರ್ ಪ್ರಶಾಂತ್ ಯಾನೆ ಪಚ್ಚು ಮತ್ತು ಅಶ್ವಿತ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು ಬಜ್ಪೆಯ ಪಟಾಕಿ ಮಾರಾಟ ಮಳಿಗೆಗಳಿಗೆ ತೆರಳಿ ನಾವು ಹಣ ಕೊಡುವುದಿಲ್ಲ ಆದರೆ ಪಟಾಕಿ ಕೊಡಲೇಬೇಕು ಎಂದು ಬೆದರಿಸಿ ಸುಲಿಗೆ ಮಾಡಿದ್ದಾರೆ.
ಈ ಘಟನೆ ಅಕ್ಟೋಬರ್ 22ರಂದು ನಡೆದಿದ್ದು ಪಟಾಕಿ ಅಂಗಡಿಗಳ ಮಾಲಕರು ಹೆದರಿ ಪೊಲೀಸ್ ದೂರು ನೀಡಲು ಹಿಂದೇಟು ಹಾಕಿದ್ದರು.
ಇತ್ತೀಚಿಗೆ ವಿಚಾರ ತಿಳಿದು ಪೊಲೀಸರು ರಕ್ಷಣೆ ನೀಡುವ ಭರವಸೆ ನೀಡಿದ ಬಳಿಕ ಪಟಾಕಿ ಅಂಗಡಿಯೊಂದರ ಮಾಲಕ ದಾಮೋದರ ಎಂಬವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ದೂರು ದಾಖಲಿಸಿದ್ದರು.
ಈ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ರೌಡಿಶೀಟರ್ ಪ್ರಶಾಂತ್ ಇತ್ತೀಚೆಗೆ ಕೊಲೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಆಪ್ತ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.



