ಬಂಟ್ವಾಳ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್‌ನ ಸಹಯೋಗದೊಂದಿಗೆ ಮೇ 12 ರಂದು ಪಾಣೆಮಂಗಳೂರು ಆಲಡ್ಕದ ಎಸ್. ಎಸ್. ಆಡಿಟೋರಿಯಂನಲ್ಲಿ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು ಎಚ್ ಉಮ್ಮರ್ ತಿಳಿಸಿದರು.
ಶನಿವಾರ ಬಿ.ಸಿ.ರೋಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 12 ರಂದು ಬೆಳಿಗ್ಗೆ 9.30ಕ್ಕೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಬಳಿಯಿಂದ ಸಮ್ಮೇಳನ ಸಭಾಂಗಣದ ತನಕ ಸಮ್ಮೇಳನಾಧ್ಯಕ್ಷ ಹಿರಿಯ ಕವಿ, ಗಾಯಕ ರಹೀಂ ಬಿ.ಸಿ.ರೋಡು ಅವರ ಮೆರವಣಿಗೆಯನ್ನು ಸಮ್ಮೇಳನ ಸ್ವಾಗತ ಸಮಿತಿಯ ಗೌರವ ಸಲಹೆಗಾರ ಹಾಜಿ ಪಿ. ಮುಹಮ್ಮದ್ ರಫೀಕ್ ಉದ್ಘಾಟಿಸಲಿದ್ದು, 10.00ಕ್ಕೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್. ಧ್ವಜಾರೋಹಣ ನೆರವೇರಿಸಲಿದ್ದಾರೆ.
ಕರ್ನಾಟಕ ವಿಧಾನಸಭಾಧ್ಯಕ್ಷ ಡಾ. ಯು. ಟಿ. ಖಾದರ್ ಫರೀದ್ ಸಮ್ಮೇಳನ ಉದ್ಘಾಟಿಸಲಿದ್ದು, ಹಿರಿಯ ಕವಿ, ಗಾಯಕ ರಹೀಂ ಬಿ.ಸಿ.ರೋಡು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಶಾಸಕ ಯು. ರಾಜೇಶ್ ನಾಯಕ್ ಉಮೈರತ್ ಕುಮೇರ್ ಅವರ ಬೈಲ್ ಮಲೆ (ಬ್ಯಾರಿ ಕಥಾಸಂಕಲನ) ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ದ.ಕ. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್, ಮೊಹಿದ್ದಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ. ಅಬ್ದುಲ್ ಸಲಾಂ ತುಂಬೆ, ಜನಪ್ರಿಯ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಅಬ್ದುಲ್ ಬಶೀರ್ ವಿ.ಕೆ., ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಸೆನೆಟ್ ಸದಸ್ಯ ಡಾ. ಮುಸ್ತಪಾ ಬಸ್ತಿಕೋಡಿ, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುಮ್ತಾಝ್ ಎಚ್.ಐ., ಎ.ಜೆ. ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯೆ ಡಾ. ಹಸೀನಾ ಪೊನ್ನೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ನಡೆಯಲಿರುವ ಚರ್ಚಾಗೋಷಿಯನ್ನು ಪತ್ರಕರ್ತ ಬಶೀರ್ ಅಡ್ಯನಡ್ಕ ನಿರೂಪಿಸಲಿದ್ದು, ತುಂಬೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಿ.ಬಿ. ಅಬ್ದುಲ್ ರಹಿಮಾನ್, ಲೇಖಕಿ, ಕವಯತ್ರಿ ಆಯಿಷಾ ಯು.ಕೆ, ಯೇನಪೋಯ ಪದವಿ ಕಾಲೇಜಿನ ಪ್ರಾಧ್ಯಾಪಕ ಮುಹಮ್ಮದ್ ಶಾಹಿದ್ ವಳವೂರು ಚರ್ಚಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 2.00 ರಿಂದ ಬ್ಯಾರಿ ಕವಿಗೋಷ್ಠಿ, ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ, ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಹಾಜಿ ಜಿ.ಎ. ಬಾವಾ, ಪೂನಾದ ಡಾ. ಡಿ.ವೈ. ಪಾಟೀಲ್ ವಿ.ವಿ.ಯ ಕುಲಸಚಿವ ಡಾ. ಬಿ.ಎಂ. ಬೀರಾನ್ ಮೊಹಿದಿನ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಉಸ್ಮಾನ್ ಕರೋಪಾಡಿ, ಹಿರಿಯ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಪುತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಜಾಕ್ ಅನಂತಾಡಿ ಸಮಾರೋಪ ಬಾಷಣ ಮಾಡಲಿದ್ದಾರೆ.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಎಂ.ಎಂ. ಶರೀಫ್ ಆಲಡ್ಕ, ಅಬ್ಬೋನು ನಂದಾವರ, ಅವ್ವಮ್ಮ ಒಕ್ಕೆತ್ತೂರು, ಅಬ್ದುಲ್ ಖಾದರ್ (ಮೋನುಞ್ಞಿ) ಕಲ್ಲಡ್ಕ, ಇಸ್ಮಾಯಿಲ್ ಅರಬಿ ಬಂಟ್ವಾಳ, ಮೊಹಮ್ಮದ್ ಕೋಡಪದವು, ಝುಬೈದಾ ಪರ್ಲೊಟ್ಟು ಇವರು ಸನ್ಮಾನ ಸ್ವೀಕರಿಸಲಿದ್ದಾರೆ. ಸಮ್ಮೇಳನದಲ್ಲಿ ದಫ್ ಪ್ರದರ್ಶನ, ಬ್ಯಾರಿ ಹಾಡುಗಳ ಸಂಭ್ರಮ ಮತ್ತು ʼತೆರು ತಪ್ಪಿರ್ʼ ಬ್ಯಾರಿ ನಾಟಕ ಪ್ರದರ್ಶನ ನಡೆಯಲಿದೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಅದ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಕೋಶಾಧಿಕಾರಿ ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ಉಪಸ್ಥಿತರಿದ್ದರು.



